vorkady struggles for survivel

vorkady struggles for survivel
Gail

Saturday 7 January 2012

Udayavani: Kannada

Udayavani: Kannada
  • ಕೊಚ್ಚಿ-ಮಂಗಳೂರು ಗ್ಯಾಸ್‌ ಪೈಪ್‌ಲೈನ್‌
  • ಅಭಿವೃದ್ಧಿಯ ಹೆಸರಿನಲ್ಲಿ ಕೃಷಿಕರ ಬದುಕಿಗೆ ಕೊಡಲಿಯೇಟು

  • ಗ್ರಾಮೀಣ ಪ್ರದೇಶಗಳಲ್ಲಿ ಸಂತ್ರಸ್ತರ ಹೋರಾಟವೂ ಶಕ್ತಗೊಳ್ಳುತ್ತಿದೆ.

    • ಹರ್ಷಾದ್‌ ವರ್ಕಾಡಿ | Jan 07, 2012

      ಮಂಜೇಶ್ವರ: ಉದ್ದೇಶಿತ ಕೊಚ್ಚಿ-ಮಂಗಳೂರು ಗ್ಯಾಸ್‌ ಸಾಗಾಟ ಪೈಪ್‌ಲೈನ್‌ ವಿರುದ್ಧ ಕೇರಳದಾದ್ಯಂತ ವ್ಯಾಪಕ ಹೋರಾಟಗಳು ಕಾಣಿಸಿಕೊಂಡಿವೆ. ಪ್ರಜಾಪ್ರಭುತ್ವದ ಹಾಗೂ ಕಾನೂನಿನ ಎಲ್ಲ ಮಜಲುಗಳನ್ನು ಗಾಳಿಗೆ ತೂರಿ ಗೈಲ್‌ ಇಂಡಿಯಾ ಸಂಸ್ಥೆ ಗ್ಯಾಸ್‌ಪೈಪ್‌ಲೈನ್‌ನ್ನು ಅಳವಡಿಸುತ್ತಿದ್ದು, ಕಾಸರಗೋಡು ಜಿಲ್ಲೆಯ ಸಹಿತ ಸಾವಿರಾರು ಮಂದಿ ನಿರ್ವಸಿತರಾಗಲಿದ್ದಾರೆ.

      ಬಹುತೇಕ ಕೃಷಿಭೂಮಿಯಲ್ಲಿ ಹಾದುಹೋಗುವ ಗ್ಯಾಸ್‌ ಪೈಪ್‌ಲೈನ್‌ ಸ್ಥಾಪಿಸಲು ಭೂಸ್ವಾದಿನ ಪ್ರಕ್ರಿಯೆ ಚುರುಕುಗೊಂಡಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಂತ್ರಸ್ತರ ಹೋರಾಟವೂ ಶಕ್ತಗೊಳ್ಳುತ್ತಿದೆ.


      ಕೇರಳ ರಾಜ್ಯದ ಕೊಚ್ಚಿ ಪುದುವೈಪಿನ ಎಲ್‌.ಎನ್‌.ಜಿ. ಟರ್ಮಿನಲ್‌ನಿಂದ ಮಂಗಳೂರಿಗೆ ಹಾಗೂ ಬೆಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸಲು ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌(ಗೈಲ್‌) ಸಂಸ್ಥೆ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ 2009ರ ಸೆಪ್ಟಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ವಿ.ಎಸ್‌. ಅಚ್ಯುತಾನಂದನ್‌ ಸರಕಾರ ನಿಶ್ಯರ್ಥ ಅನುಮತಿಯನ್ನು ನೀಡಿತ್ತು. ಪ್ರಸ್ತುತ ಪೈಪ್‌ಲೈನ್‌ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗಲಿದ್ದು, ಜನ ಆತಂಕಗೊಂಡಿದ್ದಾರೆ.

      ಎರ್ನಾಕುಲಂ, ತೃಶೂರು, ಪಾಲಕ್ಕಾಡ್‌, ಮಲಪ್ಪುರಂ, ಕೋಯಿಕ್ಕೋಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಮೂಲಕ ಮಂಗಳೂರಿಗೆ ಹಾದುಹೋಗುವ ಗ್ಯಾಸ್‌ ಪೈಪ್‌ಲೈನಿನ ಕಾಮಗಾರಿ ಪ್ರಾರಂಭಗೊಂಡಿದ್ದು, ಭಾರೀ ಸಂಖ್ಯೆಯ ಪೈಪ್‌ಗ್ಳು ಕೇರಳವನ್ನು ತಲುಪುತ್ತಿವೆ. 14,500 ಕೋ.ರೂ.ವ್ಯಯಿಸಿ 354 ಕಿ.ಮೀ.ಉದ್ದದ ಕೊಚ್ಚಿ-ಮಂಗಳೂರು ಹಾಗೂ 254 ಕಿ.ಮೀ.ಉದ್ದದ ಕೊಚ್ಚಿ-ಬೆಂಗಳೂರು ಪೈಪ್‌ಲೈನಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹಸಿರು ನಿಶಾನೆ ಈಗಾಗಲೇ ನೀಡಿದೆ. 2 ಅಡಿ ಅಗಲದ ಪೈಪ್‌ ಅಳವಡಿಸಲು 20 ಮೀ.ಸ್ಥಳವನ್ನು ಸ್ವಾಧೀನಪಡಿಸಲಾಗುತ್ತಿದ್ದು, ಬಹುತೇಕ ಕೃಷಿಭೂಮಿ ಎಂಬುದು ಗಮನಾರ್ಹ. ಪ್ರತಿಯೊಂದೂ ಪೈಪ್‌ 12 ಮೀಟರ್‌ ಉದ್ದವಿದ್ದು, 24 ಇಂಚು ಅಗಲವಿದೆ. ಸುಮಾರು 6 ಅಡಿ ಆಳದಲ್ಲಿ ಈ ಪೈಪ್‌ಗ್ಳನ್ನು ಅಳವಡಿಸಲಾಗುತ್ತದೆ. ಪ್ರತಿಯೊಂದು ಪೈಪಿಗೆ 2 ಲಕ್ಷ.ರೂ.ಮೌಲ್ಯವಿದೆ. ಪ್ರಸ್ತುತ ಪೈಪನ್ನು ಅಳವಡಿಸಲು ಸ್ವಾಧೀನ ಪಡಿಸುವ ಸ್ಥಳದ ಮೌಲ್ಯದ ಶೇಕಡಾ.10ರಷ್ಟು ಮೊತ್ತವನ್ನು ಮಾತ್ರ ಪರಿಹಾರ ಧನವಾಗಿ ನೀಡುವುದಾಗಿ ಅಧಿಕೃತರು ಈಗಾಗಲೇ ಘೋಷಿಸಿದ್ದು, ಸಾವಿರಾರು ಮಂದಿ ತಮ್ಮ ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ.


      ವ್ಯಾಪಕ ಹೋರಾಟ

      ಆಸ್ಟ್ರೇಲಿಯಾದಿಂದ ಹಡಗಿನ ಮೂಲಕ ಕೊಚ್ಚಿಗೆ ತಲುಪುವ ನೈಸರ್ಗಿಕ ಅನಿಲವನ್ನು ಪೈಪ್‌ಲೈನ್‌ ಮೂಲಕ ಸಾಗಿಸುವ ಈ ಯೋಜನೆ ರಾಜ್ಯದ ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡುವುದು ಖಚಿತಗೊಂಡಿದೆ. ಪುಡಿಗಾಸಿನ ಪರಿಹಾರ ನೀಡಿ ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸುವ ವ್ಯವಸ್ಥೆಗಳು ನಡೆಯುತ್ತಿದ್ದು, ಕೇರಳದುದ್ದಕ್ಕೂ ಕೃಷಿಭೂಮಿಗಳು ಪೈಪ್‌ಲೈನ್‌ ಯೋಜನೆಗೆ ಬಲಿಯಾಗಲಿದೆ. ಜನ ನಿಬಿಡ ಪ್ರದೇಶಗಳ ಮೂಲಕ ಸಾಗುವ ಈ ಪೈಪ್‌ಲೈನಿನ ಸುರಕ್ಷತೆಯ ಬಗ್ಗೆ ಗೈಲ್‌ ಕಂಪೆನಿ ಯಾವುದೇ ಭರವಸೆಯನ್ನೂ ನೀಡುತ್ತಿಲ್ಲ. ಕೇಂದ್ರ ಸರಕಾರದ 1962ರ ಪೆಟ್ರೋಲಿಯಂ ಮತ್ತು ಮಿನರಲ್‌ ಪೈಪ್‌ಲೈನ್‌ ಕಾಯ್ದೆ ಅನುಸಾರ ಭೂಸ್ವಾಧೀನ ನಡೆಸುವುದಾಗಿ ಗೈಲ್‌ ಸಂಸ್ಥೆ ಸುತ್ತೋಲೆ ಹೊರಡಿಸಿದ್ದು, ತಾವು ಭೂಮಿಯನ್ನು ಪೂರ್ಣ ವಶಕ್ಕೆ ತೆಗೆದುಕೊಳ್ಳುವುದಿಲ್ಲವೆಂದೂ, 20 ಮೀ.ಅಗಲದಲ್ಲಿನ ಸ್ಥಳದ ಹಕ್ಕನ್ನು ಮಾತ್ರ ಪಡೆಯುವುದಾಗಿಯೂ, ಪೈಪ್‌ಲೈನ್‌ ಅಳವಡಿಸಿದ ಬಳಿಕ ಈ ಸ್ಥಳದಲ್ಲಿ ಯಾವುದೇ ಕಟ್ಟಡ, ರಸ್ತೆ, ಬಾವಿ, ಕೊಳವೆಬಾವಿ, ಇಂಗುಗುಂಡಿ, ಕುಡಿಯುವ ನೀರಿನ ಪೈಪ್‌ಲೈನ್‌, ಚರಂಡಿ, ಆವರಣಗೋಡೆ, ನಿರ್ಮಿಸ ಕೂಡದೆಂದೂ, ಮರಗಳನ್ನು ನೆಡಕೂಡದೆಂದೂ ನಿರ್ದೇಶಿಸಿದೆ.

      ಪೈಪ್‌ಲೈನ್‌ ಸ್ಥಾಪಿಸಲು ಕೆಲವು ವರ್ಷಗಳಿಂದಲೆ ಸರ್ವೆ ನಡೆದಿದ್ದು, ಇದನ್ನು ರಹಸ್ಯವಾಗಿಡಲಾಗಿತ್ತು. ಇದೀಗ ಏಕಾಏಕಿ ಭೂಮಾಲಕರಿಗೆ ನೋಟಿಸು ಜಾರಿ ಮಾಡಿದ್ದು, ಕಾಸರಗೋಡು ತಾಲೂಕಿನಲ್ಲಿ ಈಗಾಗಲೇ ನಿವೃತ್ತ ಕಂದಾಯ ಅಧಿಕಾರಿಗಳ ಮೂಲಕ ಭೂಸ್ವಾಧೀನದ ಪ್ರಾಥಾಮಿಕ ಕೆಲಸಗಳು ಪೂರ್ಣಗೊಂಡಿದೆ.

      ಕರಾವಳಿ ತೀರದಲ್ಲಿ ಸ್ಥಾಪಿಸಿ

      ಕೊಚ್ಚಿಯಿಂದ ಮಂಗಳೂರಿಗೆ ಕಡಲ ತೀರದಲ್ಲಿ ಪ್ರಸ್ತುತ ಪೈಪ್‌ಲೈನನ್ನು ಅಳವಡಿಸಬಾರದೇಕೆ ಎಂದು ಸಂತ್ರಸ್ತರು ಗೈಲ್‌ ಅಧಿಕೃತರನ್ನು ಪ್ರಶ್ನಿಸಿದ್ದಾರೆ. ಕಡಲ ತೀರದಲ್ಲಿ ಇದನ್ನು ಸ್ಥಾಪಿಸಿದರೆ ಸುಗಮ, ಮಿತಬಂಡವಾಳ ಹಾಗೂ ಯಾವುದೇ ಅಡೆತಡೆಗಳಿಲ್ಲದೇ ಸುರಕ್ಷಿತವಾಗಿರುವಾಗ ಸಹಸ್ರಾರು ಸಂಖ್ಯೆಯ ಕೃಷಿಕರನ್ನು ನಿರಾಶ್ರಿತರನ್ನಾಗಿಸಿ, ಯಾವುದೇ ಸುರಕ್ಷತೆಯ ಭರವಸೆಯನ್ನು ನೀಡದೆ ಜನನಿಬಿಡ ಪ್ರದೇಶಗಳ ಮೂಲಕ ಕೊಡೊಯ್ಯುವುದು ನ್ಯಾಯವಲ್ಲವೆಂದು ಅಲ್ಲಲ್ಲಿ ಹೋರಾಟ ಸಮಿತಿಗಳನ್ನು ರಚಿಸಿ ಕೃಷಿಕರು, ಸಂತ್ರಸ್ತರು ಹೋರಾಟಕ್ಕಿಳಿದಿದ್ದಾರೆ. ಸಾವಿರಾರು ಜನರ ಬದುಕನ್ನು ಕಸಿಯುವ ರೀತಿಯಲ್ಲಿ ಭೂಸ್ವಾಧೀನದ ಬಗ್ಗೆ ಗ್ರಾಮಾಧಿಕಾರಿಗಳಿಗಾಗಲಿ, ಕಂದಾಯ ಅಧಿಕಾರಿಗಳಿಗಾಗಲಿ ಯಾವುದೇ ಮಾಹಿತಿ ಇಲ್ಲದಿರುವುದು ಇನ್ನೂ ನಿಗೂಢವಾಗಿದೆ. ಜನರ ಬದುಕಿಗೆ ಕೊಳ್ಳಿಯಿಡುವ ಗ್ಯಾಸ್‌ ಪೈಪ್‌ಲೈನ್‌ನಿಂದಾಗಿ ಭೂಮಿ ಕಳೆದುಕೊಳ್ಳುವ ಮಂದಿ ಕಂಗಾಲಾಗಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಸರ್ವಸ್ವವನ್ನೂ ಕಳೆದುಕೊಳ್ಳಲಿರುವ ಅಮಾಯಕರ ಆರ್ತನಾದವನ್ನು ಕೇಳುವವರಿಲ್ಲದಿರುವುದು ದುರಂತ.

      ಕಾಸರಗೋಡು ಜಿಲ್ಲೆಯಲ್ಲಿ ಪೈಪ್‌ಲೈನ್‌

      ಕಣ್ಣೂರು ಜಿಲ್ಲೆಯ ಮೂಲಕ ಹಾದು ಕಾಸರಗೋಡು ಜಿಲ್ಲೆಯ ತಳಿಪರಂಬು ಸಮೀಪದ ಕೊಡಕ್ಕಾಡು ಮೂಲಕ ಜಿಲ್ಲೆಯನ್ನು ಪ್ರವೇಶಿಸುವ ಗೈಲ್‌ ಗ್ಯಾಸ್‌ ಪೈಪ್‌ಲೈನ್‌ ಕಾಸರಗೋಡಿನ ಚೆರ್ಕಳದ ಮೂಲಕ ಸಾಗಿ ಮಧೂರು, ಮಾಯಿಪ್ಪಾಡಿ, ನಾೖಕಾಪು, ಸೂರಂಬೈಲು, ಎಡನಾಡು, ಕೊಡಿಯಮ್ಮೆ, ಬಂಬ್ರಾಣ,ಇಚ್ಚಿಲಂಗೋಡು, ಉಪ್ಪಳ ಹೊಳೆಯ ಮೂಲಕ ಮೀಂಜ, ಕಳಿಯೂರು, ಕೊಡ್ಲಮೊಗರು ಗ್ರಾಮಗಳ ಮೂಲಕ ಸಾಗಿ ಮುಡಿಪು ಹಾದಿಯಾಗಿ ಕರ್ನಾಟಕವನ್ನು ಪ್ರವೇಶಿಸುತ್ತವೆ.

      ಅಧಿಕೃತರ ಮೊಕ್ಕಾಂ

      ಜ.12 ಹಾಗೂ 13ರಂದು ಮೀಂಜ ಪಂಚಾಯತು ಸಭಾಂಗಣದಲ್ಲಿ ಗೈಲ್‌ ಹಾಗೂ ಕಂದಾಯ ಅಧಿಕಾರಿಗಳು ಮೊಕ್ಕಾಂ ಹೂಡಲಿದ್ದು, ಮಿಂಜ ಪಂಚಾಯತಿಗೊಳಪಟ್ಟ ಸಂತ್ರಸ್ತರು ಈ ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಈಗಾಗಲೇ ಭೂಸ್ವಾಧೀನ ನೋಟಿಸಿಗೆ ತಕರಾರು ಅರ್ಜಿ ಸಲ್ಲಿಸಿದವರಿಗೆ ಈ ಸಭೆಯಲ್ಲಿ ಭಾಗವಹಿಸುವಂತೆ ನೋಟಿಸು ನೀಡಲಾಗಿದ್ದು, ಗೈಲ್‌ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳೂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

      ಪೈಪ್‌ಲೈನ್‌ನಲ್ಲಿ ಭೂಮಿ ಕಳೆದುಕೊಳ್ಳುವವರು ನೋಟಿಸು ಜಾರಿಗೊಂಡ 21 ದಿವಸಗಳೊಳಗೆ ಕೊಚ್ಚಿಯ ಗೈಲ್‌ ಸಂಸ್ಥೆಗೆ ಪ್ರತಿಕ್ರಿಯಿಸಬೇಕಾಗಿದೆ. ಇದರ ಅರ್ಜಿ ನಮೂನೆ ವೆಬ್‌ಸೈಟಿನಲ್ಲಿ ಲಭ್ಯವಿದೆ. www.gadinaadu.blogspot.com

No comments:

Post a Comment